ದಾನ ಮಾಡುವ ಸ್ಫೂರ್ತಿ ಮನಸ್ಸಿನೊಳಗಿಂದಲೇ ಬರಬೇಕು, ಹೊರಗಿನ ಒತ್ತಡದಿಂದಲ್ಲ: ರಮೇಶ್ ಅರವಿಂದ್
ಮಂಗಳೂರು: ಐದನೇ ವರ್ಷದ ಎಂ.ಆರ್.ಜಿ. ಗ್ರೂಪ್ ಆಶಾ ಪ್ರಕಾಶ್ ಶೆಟ್ಟಿ ಸಹಾಯಹಸ್ತ "ನೆರವು" ಕಾರ್ಯಕ್ರಮ ಸೋಮವಾರ ಸಂಜೆ ನಗರದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಜರುಗಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತಾಡಿದ ಖ್ಯಾತ ನಟ, ನಿರ್ದೇಶಕ ರಮೇಶ್ ಅರವಿಂದ್ ಅವರು, "ಪ್ರಕಾಶ'' ಅಂದರೆ ಬೆಳಕು. ಜನರ ಕಷ್ಟಕ್ಕೆ ನೇರವಾಗಬೇಕು ಎನ್ನುವ ಬೆಳಕು ಹೊರಗಿನಿಂದ ಫೋರ್ಸ್ ಆಗಿ ಬರೋದಲ್ಲ. ಮನಸಿನ ಒಳಗಿನಿಂದ ಬರಬೇಕು. ಇರೋದೊಂದೇ ಬದುಕು ಅದನ್ನು ದಾನ ಧರ್ಮಗಳ ಮೂಲಕ ಚಂದಗಾಣಿಸಬೇಕು. ದಾನ ಅನ್ನೋದನ್ನು ತಕ್ಷಣ ಮಾಡಬೇಕು, ಯಾರಿಗೆ ಎಷ್ಟು ಬೇಕೋ ಅಷ್ಟನ್ನು ವಿನಯದಿಂದ ಅವಶ್ಯಕತೆ ಇದ್ದಾಗಲೇ ದಾನ ಮಾಡಬೇಕು. ಅದನ್ನೇ ಪ್ರಕಾಶ್ ಶೆಟ್ಟಿ ಅವರು ಮಾಡುತ್ತಾ ಬಂದಿದ್ದಾರೆ. ನಾಳೆಯ ಭರವಸೆಯೇ ನಮ್ಮೆಲ್ಲರ ಬದುಕಿಗೆ ಸ್ಫೂರ್ತಿಯಾಗಿದೆ. ಮಾಡುವ ಕೆಲಸದಲ್ಲಿ ಬದ್ಧತೆ, ನಂಬಿಕೆ ಮತ್ತು ನನ್ನಂತೆ ಬೇರೆಯವರು ಕೆಲಸ ಮಾಡಲಿಕ್ಕಿಲ್ಲ ಎಂಬ ವಿಶ್ವಾಸ ನಿಮ್ಮಲ್ಲಿದ್ದರೆ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. 5ನೇ ವರ್ಷದ ನೆರವು ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿಯ ಬದುಕಿಗೆ ಬೆಳಕಾಗಲಿ" ಎಂದರು.
ಎಂ. ಅರ್. ಜಿ ಗ್ರೂಪ್ನ ಕೆ.ಪ್ರಕಾಶ್ ಶೆಟ್ಟಿ ಅವರು ಮಾತಾಡುತ್ತಾ, "ತುಳುನಾಡಿನಲ್ಲಿ ಜನಿಸಿರುವುದೇ ನನಗೆ ಹೆಮ್ಮೆ. ಬಾಲ್ಯದಲ್ಲಿ ನನ್ನ ಬಡತನ ಮತ್ತು ಸಂಕಷ್ಟದ ಕಾರಣಕ್ಕೆ ನಾನು ಊರುಬಿಟ್ಟು ಬೆಂಗಳೂರಿಗೆ ಹೋಗಬೇಕಾಯಿತು. ಅಲ್ಲಿ ನನ್ನ ಕಷ್ಟ ಕಳೆದು ಯಶಸ್ಸಿನ ಒಂದೊಂದೇ ಮೆಟ್ಟಿಲನ್ನು ಹತ್ತಲು ಸಾಧ್ಯವಾಯಿತು. ಶ್ರೀಕೃಷ್ಣ ಪರಮಾತ್ಮನ ನೀನು ಕರ್ಮ ಮಾಡು ಫಲ ನಿರೀಕ್ಷಿಸಬೇಡ ಎಂಬ ಮಾತಿನಂತೆ ನಾನು ಕಷ್ಟದಲ್ಲಿರುವ ಜನರ ಸೇವೆ ಮಾಡುತ್ತಿದ್ದೇನೆ. ಕೋವಿಡ್ ಸಮಯದಲ್ಲಿ ನಾವು ಜನರಿಗೆ ನೆರವು ನೀಡಬೇಕು ಎಂಬ ಉದ್ದೇಶದಿಂದ ಸಾವಿರಾರು ಮಂದಿಗೆ ಆಹಾರ ಕಿಟ್ ಗಳನ್ನು ಹಂಚಿದ್ದೇವೆ. ಐದು ವರ್ಷಗಳ ಹಿಂದೆ ಆರಂಭವಾದ ಸೇವಾ ಯೋಜನೆ ಈ ಬಾರಿ ಸುಮಾರು 5 ಕೋಟಿ ಮೊತ್ತದ ನೆರವನ್ನು ನೀಡುವ ಮೂಲಕ ಯಶಸ್ಸು ಕಂಡಿದೆ. ಗುರುಹಿರಿಯರು, ದೈವದೇವರು, ಫಲಾನುಭವಿಗಳ ಆಶೀರ್ವಾದ ನನ್ನ ಮೇಲೆ ಹೀಗೆಯೇ ಇರಲಿ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಎಲ್ಲರಿಗೂ ನೆರವು ಕೊಡುವುದು ನನ್ನಿಂದ ಅಸಾಧ್ಯ. ಆದರೆ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಮಂದಿಗೆ ನೆರವು ನೀಡಲು ಖಂಡಿತ ಸಿದ್ಧನಿದ್ದೇನೆ. ನಾನು ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡುವುದಿಲ್ಲ. ಸಹಾಯ ಪಡೆದ ಫಲಾನುಭವಿಗಳು ನಿಮ್ಮ ಜೀವನವನ್ನು ಸಂಕಷ್ಟದಿಂದ ಗೆಲುವಿನ ಕಡೆಗೆ ಕೊಂಡೊಯ್ಯಿರಿ. ನಿಮಗೆಲ್ಲ ಶುಭವಾಗಲಿ" ಎಂದರು.
- cities
- mangaluru
- Actor Ramesh Aravind Motivational Speech In Mangaluru Inspiration For Life Charity