ಯಾರು ಏನೇ ಮಾಡಿದರೂ ತಾಯಿ ಚಾಮುಂಡಿ ಕೈಬಿಡುವುದಿಲ್ಲ, ನನ್ನ ಮ್ಯಾಚ್ ಮಾಡೋಕೆ ಯಾರಿಗೂ ಆಗಲ್ಲ: ಪ್ರತಾಪ್ ಸಿಂಹ
'' ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನಾನು ಗೆದ್ದರೆ, ಸಿದ್ದರಾಮಯ್ಯ ಅವರ ಸೀಟು ಅಲುಗಾಡುತ್ತದೆ. ಹೀಗಿರುವಾಗ ಕಾಂಗ್ರೆಸ್ಗೆ ನಮ್ಮ ಪಕ್ಷದವರು ಹೇಗೆ ಸಪೋರ್ಟ್ ಮಾಡುತ್ತಾರೆ?'' ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದರು.
ಲೋಕಸಭಾ ಟಿಕೆಟ್ ಹಂಚಿಕೆ ಗೊಂದಲದ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, ''ಸಂಸದರ ಟಿಕೆಟ್ ನಿರ್ಧಾರ ಮಾಡೋದು ಜನ. ರಾಜ್ಯದಲ್ಲಿ 28 ಮಂದಿ ಸಂಸದರು ಇದ್ದಾರೆ. ಅವರ ಪರ್ಫಾರ್ಮೆನ್ಸ್ ನೋಡಿ ಟಿಕೆಟ್ ನೀಡುತ್ತಾರೆ. ಜನ ಖುಷಿಯಾಗಿದ್ದಾರೆ ಅಂದ್ರೆ ಮೇಲಿನವರೂ ಅದೇ ನಿರ್ಧಾರ ಮಾಡುತ್ತಾರೆ. ಮೈಸೂರಿನಲ್ಲಿ ನಾನು ಇಂಥ ಕೆಲಸ ಮಾಡಿಲ್ಲ ಎಂದು ಹೇಳಲಿ. ಯಾರೋ ಒಂದಷ್ಟು ಜನ ಅಸೂಯೆಗೆ ಮಾತನಾಡುತ್ತಾರೆ. ನನ್ನನ್ನು ಕಾಯಲು ಬೆಟ್ಟದ ಮೇಲೆ ಒಬ್ಬಳು ತಾಯಿ ಇದ್ದಾಳೆ. ಮೈಸೂರಿನಲ್ಲಿ ಯಾರೂ ಮಾಡಿರದಷ್ಟು ಅಭಿವೃದ್ಧಿ ಕೆಲಸಗಳನ್ನು ನಾನು ಮಾಡಿದ್ದೇನೆ. ಚಾಮುಂಡಿ ತಾಯಿ ನನ್ನ ಕೈಬಿಡುವುದಿಲ್ಲ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
''ಗ್ರೇಟರ್ ಮೈಸೂರು ಮಾಡಲು ನಾನು ಹೊರಟಿದ್ದೇನೆ. ಹಲವು ಅಭಿವೃದ್ಧಿ ಯೋಜನೆಗಳನ್ನು ಮಾಡಿದ್ದೇನೆ. ಹಿಂದುತ್ವದ ಪರ ಕೆಲಸ ಮಾಡಿದ್ದೇನೆ. ಕರ್ನಾಟಕ ಆಳಿದವರಿಂದಲೂ ಔಟರ್ ರಿಂಗ್ರೋಡ್ ತರಲು ಆಗಿಲ್ಲ. ನಾನು ರಾಜ್ಯದಲ್ಲಿ ಮೊದಲಾಗಿ ಮೈಸೂರಿಗೆ ಮೊದಲ ಪೆರಿಪೆರಲ್ ರಿಂಗ್ ರೋಡ್ ತರಲು ಹೊರಟಿದ್ದೇನೆ. ನಾನು ಮಾಡಿರುವ ಅಭಿವೃದ್ದಿ ಕೆಲಸವೇ ನನಗೆ ಶ್ರೀರಕ್ಷೆ. ಮೈಸೂರು ಕೊಡಗಿನ ಜನರು ನನ್ನ ಕೈ ಹಿಡಿಯುತ್ತಾರೆ. ಈ ಬಾರಿಯೂ ನಾನು 2 ರಿಂದ 3 ಲಕ್ಷ ಮತಗಳಿಂದ ಗೆಲ್ಲುತ್ತೇನೆ. ಎಲ್ಲರಿಗೂ ಟಿಕೆಟ್ ಕೇಳುವ ಹಕ್ಕಿದೆ. 10 ವರ್ಷ ನಿಯತ್ತಾಗಿ ಕೆಲಸ ಮಾಡಿದ್ದೇನೆ. ಪ್ರೀತಿಸುವವರು ಅಷ್ಟೇ ಇದ್ದಾರೆ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿರುವೆ'' ಎಂದು ಪ್ರತಾಪ್ ಸಿಂಹ ಹೇಳಿದರು.
- cities
- mysuru
- Mysuru Kodagu Loksabha Constituency Bjp Ticket Pratap Simha About 10 Years Work Slams Congress Siddarammaiah