Explainer Video: ದೋಸ್ತಿ ಸರ್ಕಾರಕ್ಕೆ ವೇದಿಕೆಯಾದ ಪಾಕಿಸ್ತಾನ ಸಂಸತ್!
ಪಾಕಿಸ್ತಾನದಲ್ಲಿ ಚುನಾವಣೆ ಅನ್ನೋ ಬೃಹನ್ನಾಟಕ ಮುಗಿದಿದೆ. ಫಲಿತಾಂಶ ಹೊರ ಬಿದ್ದ ಬಳಿಕ ಇದೀಗ ಸರ್ಕಾರ ರಚನೆ ಕಸರತ್ತು ಶುರುವಾಗಿದೆ. ಆದರೆ ಪಾಕಿಸ್ತಾನದ ಮತದಾರ ಕೊಟ್ಟಿರುವ ಅತಂತ್ರ ಫಲಿತಾಂಶ ಇದೀಗ ರಾಜಕೀಯ ರಂಗಿನಾಟಕ್ಕೆ ಕಾರಣವಾಗಿದೆ.
ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯ ಒಟ್ಟು 336 ಸ್ಥಾನಗಳ ಪೈಕಿ ಈಗ ಚುನಾವಣೆ ನಡೆದದ್ದು ಕೇವಲ 266 ಸ್ಥಾನಗಳಿಗೆ.. ಈ ಪೈಕಿ ಯಾವುದೇ ಪಕ್ಷ ಬಹುಮತ ಗಳಿಸಿ ಅಧಿಕಾರಕ್ಕೆ ಬರಲು 133 ಸದಸ್ಯ ಬಲ ಬೇಕು. ಆದರೆ ಯಾವುದೇ ಪಕ್ಷಕ್ಕೂ ಈ ಸಂಖ್ಯಾ ಬಲ ಸಿಕ್ಕಿಲ್ಲ. ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರಿಕ್ - ಇ - ಇನ್ಸಾಫ್ ಪಕ್ಷ ಈ ಚುನಾವಣೆಯಲ್ಲಿ ಅಧಿಕೃತವಾಗಿ ಸ್ಪರ್ಧೆ ಮಾಡಿಲ್ಲ. ಆದರೆ, ಇಮ್ರಾನ್ ಖಾನ್ ಪಕ್ಷದ ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿಗಳು 91 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ನವಾಜ್ ಷರೀಫ್ ಸಾರಥ್ಯದ ಪಿಎಂಎಲ್ ಎನ್ ಪಕ್ಷದ ಅಭ್ಯರ್ಥಿಗಳು 80 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಇನ್ನು ಬಿಲಾವಲ್ ಭುಟ್ಟೋ ನೇತೃತ್ವದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ 54 ಸ್ಥಾನಗಳನ್ನು ಜಯಿಸಿದೆ. ಮಿಕ್ಕೆಲ್ಲಾ ಸಣ್ಣ ಪುಟ್ಟ ಪಕ್ಷಗಳು ಹಾಗೂ ಪಕ್ಷೇತರರು 41 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಪಾಕಿಸ್ತಾನದಲ್ಲಿ ಸರ್ಕಾರ ರಚಿಸೋಕೆ ಮ್ಯಾಜಿಕ್ ನಂಬರ್ 133. ಈ ಪೈಕಿ ನವಾಜ್ ಷರೀಫ್ ಸಾರಥ್ಯದ ಪಿಎಂಎಲ್ಎನ್ ಬಳಿ 80 ಸ್ಥಾನಗಳಿವೆ. ಬಿಲಾವಲ್ ಭುಟ್ಟೋ ನಾಯಕತ್ವದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಬಳಿ 54 ಸ್ಥಾನಗಳಿವೆ. ಹೀಗಾಗಿ, ಸರ್ಕಾರ ರಚನೆಗೆ ಬೇಕಾದ ಸಂಖ್ಯಾ ಬಲ ಇಬ್ಬರೂ ದೋಸ್ತಿಗಳ ಬಳಿ ಇದೆ. ಆದರೆ ಪ್ರಧಾನಿ ಪಟ್ಟಕ್ಕಾಗಿ ಇಬ್ಬರೂ ಪೈಪೋಟಿ ನಡೆಸ್ತಿದ್ದಾರೆ. ಪಿಪಿಪಿಗಿಂತಲೂ ಸ್ವಲ್ಪ ಹೆಚ್ಚು ಸಂಖ್ಯಾ ಬಲ ಹೊಂದಿರುವ ನವಾಜ್ ಷರೀಫ್ ಸಹಜವಾಗಿಯೇ ಪ್ರಧಾನಿ ಪಟ್ಟ ತಮಗೇ ಬೇಕು ಎನ್ನುತ್ತಿದ್ಧಾರೆ. ಇತ್ತ ಬಿಲಾವಲ್ ಭುಟ್ಟೋ ತಮ್ಮ ಪಟ್ಟು ಸಡಿಲ ಮಾಡ್ತಿಲ್ಲ.
ಈ ಹಿನ್ನೆಲೆಯಲ್ಲಿ ಒಂದು ಸಂಧಾನ ಸೂತ್ರ ತಯಾರಾಗಿದೆ. ಮೊದಲ ಮೂರು ವರ್ಷ ಒಬ್ಬರು ಪ್ರಧಾನಿಯಾದರೆ, ಕೊನೆಯ ಎರಡು ವರ್ಷ ಮತ್ತೊಬ್ಬರು ಪ್ರಧಾನಿ ಆಗಲಿದ್ದಾರೆ. ಸಹಜವಾಗಿಯೇ ಹೆಚ್ಚು ಸಂಖ್ಯಾ ಬಲ ಹೊಂದಿರುವ ನವಾಜ್ ಷರೀಫ್ಗೆ ಮೊದಲು ಪ್ರಧಾನಿ ಆಗುವ ಭಾಗ್ಯ ಸಿಗಬಹುದು. ಈ ರಾಜಕೀಯ ಬೆಳವಣಿಗೆಗಳನ್ನ ಗಮನಿಸ್ತಿರುವ ಸಣ್ಣ ಪುಟ್ಟ ಪಕ್ಷಗಳು ತಾವೂ ಸರ್ಕಾರದ ಭಾಗವಾಗಲು ಹಾತೊರೆಯುತ್ತಿವೆ. ಮೈತ್ರಿ ಸರ್ಕಾರದ ಜೊತೆ ಸೇರುವ ಇಂಗಿತ ವ್ಯಕ್ತಪಡಿಸ್ತಿವೆ.
- news
- Pakistan Election Result 2024 Shehbaz Sharif Affirms Pmln Nawaz Sharif To Become Prime Minister